ವೆಂಕಟಗಿರಿರಾವ್, ದೊಡ್ಡೇರಿ
	1913-2004. ಹೆಸರಾಂತ ವೈದ್ಯ ಸಾಹಿತಿ ಹಾಗೂ ಛಾಯಾಚಿತ್ರಕಾರ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬಡ ಕೃಷಿಕ ಮನೆತನದಲ್ಲಿ 1913 ಡಿಸೆಂಬರ್ 28ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಸಾಗರದ ತಮ್ಮ ಬಂಧುಗಳ ನೆರವಿನಿಂದ ಪೂರೈಸಿದರು. ಅನಂತರದ ಶಿಕ್ಷಣಕ್ಕಾಗಿ ಬಳ್ಳಾರಿಯ ಪಂಡಿತ ತಾರಾನಾಥರ ಆಯುರ್ವೇದ ವಿದ್ಯಾಲಯದಲ್ಲಿ ಎಲ್.ಐ.ಎಂ. ಡಿಪ್ಲೊಮೊ ಪಡೆದರು. ಅನಂತರ ಸಾಗರದಲ್ಲಿ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರು ಜಿಲ್ಲೆ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಿದರು. ಅಲ್ಲಿ 30-35 ವರ್ಷಗಳ ಸುದೀರ್ಘ ಕಾಲ ವೈದ್ಯರಾಗಿ ಜನಪ್ರಿಯತೆ ಗಳಿಸಿದರು. ತಮ್ಮನ್ನು ಹುಡುಕಿಕೊಂಡು ಬಂದ ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಸಲಹೆ ಕೊಡುತ್ತಿದ್ದರು.

	1932ರಷ್ಟು ಹಿಂದೆಯೇ ಕವಿತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಕೃಷಿಗೆ ತೊಡಗಿದರು. ಅನಂತರ ಶಿಶುಸಾಹಿತ್ಯ, ಕಾದಂಬರಿ, ಸಣ್ಣಕತೆ, ವೈದ್ಯಕೀಯ ಸಾಹಿತ್ಯ, ಲೈಂಗಿಕ ಸಾಹಿತ್ಯ, ಪ್ರವಾಸಕಥನ ಮತ್ತು ಫೋಟೋಗ್ರಫಿ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

	ಇವರು ಕನ್ನಡದಲ್ಲಿ 600ಕ್ಕೂ ಹೆಚ್ಚು, ಇಂಗ್ಲಿಷ್‍ನಲ್ಲಿ 150ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 30ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆರೋಗ್ಯ, ಲೈಂಗಿಕ ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಯಾರೂ ಬರೆಯದ ಕಾಲದಲ್ಲಿ ಇವರು ದಾಂಪತ್ಯ ಜೀವನ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಐದು ವರ್ಷಗಳ ಕಾಲ  ಪ್ರಕಟಿಸಿದರು. ಪ್ರಸವ ವಿಜ್ಞಾನ, ಸಂತಾನ ಸಂಯಮ, ವಿಕೃತಕಾಮ, ಕಾಮ ಶಿಕ್ಷಣ ಎಂಬ ಹಲವು ಮೌಲ್ಯಯುತ ಕೃತಿಗಳನ್ನೂ ಪ್ರಕಟಿಸಿದರು. ಇವರ ಕವನ ಸಂಕಲನ ರೋಹಿಣಿ; ದಾಳಿಂಬೆ, ಚೆಲುವೆ, ಕರಿಗಡುಬು-ಇವು ಕಥಾಸಂಕಲನಗಳು.

	ಇವರು ಬರೆದ ಸಂಪ್ರದಾನ, ಅವಧಾನ, ದೃಷ್ಟಿದಾನ, ಅತ್ತಿಯ ಹೂವು ಮೊದಲಾದ ಕಾದಂಬರಿಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು. ಕೆಲವು ಕಾದಂಬರಿಗಳು 80ರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯತೆ ಗಳಿಸಿದುವು. ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರು ಇವರ ಅವಧಾನ ಕಾದಂಬರಿ ಆಧರಿಸಿ ಅಮೃತಘಳಿಗೆ ಎಂಬ ಚಲನಚಿತ್ರ ನಿರ್ಮಿಸಿದರು.

	ಹವ್ಯಾಸಿ ಛಾಯಾಚಿತ್ರಕಾರರಾಗಿಯೂ ಇವರು ಪ್ರಸಿದ್ಧರಾಗಿದ್ದಾರೆ. ಅದರಲ್ಲಿಯೂ ಕಪ್ಪು-ಬಿಳುಪು ಚಿತ್ರಗಳಲ್ಲಿ ಪಿಕ್ಟೋರಿಯಲ್ ಫೋಟೋಗ್ರಫಿ ವಿಭಾಗದಲ್ಲಿ ತುಂಬ ಪರಿಣಿತರಾಗಿದ್ದ ಇವರು ತಮ್ಮ ಚಿತ್ರಗಳನ್ನು ತಾವೇ ಸ್ವತಃ ಕಪ್ಪುಕೋಣೆಯಲ್ಲಿ ಕುಳಿತು ಮುದ್ರಿಸಿ ಚಿತ್ರಗಳಿಗೆ ಜೀವಕಳೆ ತುಂಬುತ್ತಿದ್ದರು. ಇವರು ವಿವಿಧ ಸ್ಪರ್ಧೆಗಳಿಗಾಗಿ ಮುದ್ರಿಸಿದ 1940-50ರ ದಶಕದ ಫೋಟೋ ಫೋಟೋಗ್ರಫಿ ಆರಂಭಿಸಿದ ಉಪಕರಣಕ್ಕಿಂತ ಅದರ ಹಿಂದಿರುವ ಮನಸ್ಸು, ಭಾವ ಮುಖ್ಯ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರು. 1958ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಫ್‍ಐಎಪಿ ಪ್ರಶಸ್ತಿಗೆ ಭಾಜನರಾದ ಇವರು ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದು ಕೊಟ್ಟ ಕೆಲವೇ ಛಾಯಾಚಿತ್ರಕಾರರಲ್ಲಿ ಒಬ್ಬರು. ಅಮೆರಿಕ ಫೋಟೋಗ್ರಾಫರ್ ಸೊಸೈಟಿ ತ್ರೀ ಸ್ಟಾರ್ ಸರ್ಟಿಫಿಕೇಟ್ ನೀಡಿ ಇವರನ್ನು ಗೌರವಿಸಿದೆ (1966). ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಕ್ ಸೊಸೈಟಿಯ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿ ದರು. ಫೋಟೋಗ್ರಫಿಯನ್ನು ಹಲವಾರು ಶಿಷ್ಯರಿಗೆ ಕಲಿಸುವಲ್ಲಿ ಯಶಸ್ವಿಯಾದರು. ಫೋಟೋಗ್ರಫಿ ಬಗ್ಗೆಯೇ ನೂರಾರು ಚಿತ್ರ-ಲೇಖನಗಳನ್ನು ಪ್ರಕಟಿಸಿರುವ ಇವರು ಭಾವಾಭಿವ್ಯಂಜಕ ಛಾಯಾ ಚಿತ್ರಕಲೆ ಎಂಬ ಅಪರೂಪದ ಪುಸ್ತಕವನ್ನು ಕನ್ನಡದಲ್ಲಿ ಬರೆದರು. ಈ ಕೃತಿಗೆ ಸಾಹಿತ್ಯ ಅಕಾಡೆಮಿ ಹಾಗೂ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ (1996). 1982ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಇವರು 2004 ಮೇ 26ರಂದು ನಿಧನರಾದರು.							
	(ಎಚ್.ಎಸ್.ಎಮ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ